Thursday, December 17, 2009

ಅಮ್ಮ ಎಂದರೆ...

ಅಮ್ಮಾ ಎಂದರೆ ಮೈಮನವೆಲ್ಲ
ಹೂವಾಗುವುದಮ್ಮ
ಎರಡಕ್ಷರದಲಿ ಏನಿದೆ ಶಕ್ತಿ
ಹೇಳುವರಾರಮ್ಮ..

ಅಮ್ಮಾ ಅಂದರೆ ಏನು ಅನ್ನೋದು ಅರ್ಥವಾಗಬೇಕಾದರೆ ಅಮ್ಮನಿಲ್ಲದ ಜಾಗದಲ್ಲಿ ಕೆಲ ಸಮಯ ಕಳೆಯಬೇಕು. ಹೈಸ್ಕೂಲನ್ನು ಮುಗಿಸುವವರೆಗೆ ಅಮ್ಮನ ಜೊತೆ ಇದ್ದಾಗ ಅವಳ ಬೆಲೆ ತಿಳಿಯುತ್ತಿರಲಿಲ್ಲ. ಓದಬೇಕೆಂದರೆ ಮನೆಯಿಂದ ಹೊರಗೆ ಬರಲೇಬೇಕಾದದ್ದರಿಂದ ಬೆಂಗಳೂರಿಗೆ ಬಂದು ಮಾವನ ಮನೆಯಲ್ಲಿದ್ದು ಓದಿದೆ. ಮುಂದೆ ನನ್ನ ಮನೆಗೆ ಹೋಗುವುದು ಪ್ರವಾಸಕ್ಕೆ ಹೋಗುವಂತೆ ವರ್ಷಕ್ಕೆ ೩-೪ ಬಾರಿ ಹೋಗುವ ಹಾಗೆ ಆಯಿತು. ಮದುವೆಯ ನಂತರವಂತೂ ವರ್ಷಕ್ಕೆರಡು ಬಾರಿ. ಒಮ್ಮೊಮ್ಮೆ ಅಮ್ಮ ಇಷ್ಟೆಲ್ಲಾ ನನಗಾಗಿ ಮಾಡಿದ್ದು ಮರೆತೇ ಬಿಟ್ಟೆನೇನೋ ಅನ್ನಿಸಿ guilt ಕಾಡುತ್ತದೆ.

ನನ್ನಮ್ಮ ತುಂಬಾ ಸಾಧು ಜೀವಿ. ಮುಂದೆ ಬಂದರೆ ಹಾಯಬೇಡಿ ತರಹ.. ಪುಣ್ಯಕೋಟಿಯ ಹಾಗೆ. ಅವಳ ಮುಗ್ಧತೆ ಒಂದು ಕೈಯ್ಯಾದರೆ, ತಿಳುವಳಿಕೆ ಇನ್ನೊಂದು ಕೈ . ಇವತ್ತಿಗೂ ಯಾರಾದರೂ ಸಿಟ್ಟಿಗೆದ್ದು ಬೈದರೆ ಅದನ್ನು ತುಂಬಾ ಸಮಯ ನೆನಪಿಡಲು ಆಗೋಲ್ಲ ನಂಗೆ. ಅವಳದ್ದೇ ಬುದ್ದಿ ಅದು.. ಬದುಕೆಲ್ಲಾ ಬರೀ ಕಷ್ಟದಲ್ಲೇ ಕಳೆದರೂ.. ಸದಾ ಸಿಡಿ ಸಿಡಿ ಗಂಡ, ಎದುರುತ್ತರ ಕೊಡಲು ಕಾಯುತ್ತಿದ್ದ ಮಗಳು, ಕೈಗೆ ಸಿಗದೇ ಸದಾಕಾಲ ಹೊರಗೆ ಆಟವಾಡುತ್ತಲೇ ಇರುತ್ತಿದ್ದ ಮಗ.. ಅದ್ಯಾವುದೂ ಅವಳನ್ನು ಸಿಟ್ಟಿಗೇಳಿಸುತ್ತಿರಲಿಲ್ಲ, ಇಂದಿಗೂ ಕೂಡ ಹಾಗೆ ಇದ್ದಾಳೆ ಅಮ್ಮ ಅನ್ನೋದು ನನಗೆ ತುಂಬಾ ಆಶ್ಚರ್ಯವನ್ನುಂಟುಮಾಡುವ ವಿಚಾರ!!

ಮೊನ್ನೆ ಅಮ್ಮ ಇದ್ದಕ್ಕಿದ್ದ ಹಾಗೆ ನೆನಪಾದಳು. ನನ್ನೊಬ್ಬಳು ಗೆಳತಿಯೊಂದಿಗೆ ಹೋಟೆಲ್ಲಿಗೆ ಹೋಗಿದ್ದೆ. ಅವಳಿಗೆ ಮಸಾಲೆ ದೋಸೆ ಪಂಚಪ್ರಾಣ. ಅವಳ ಜೊತೆ ಅವಳ ೨ ವರ್ಷದ ಮಗನೂ ಇದ್ದ. ಎಂದಿನಹಾಗೆ.. ಕಾಲೇಜು ದಿನಗಳ ಹಾಗೆ ಮಸಾಲೆ ದೋಸೆ order ಮಾಡಿದೆವು. ಅವಳಿಗೆ ಒಂದು ತುತ್ತು ಕೂಡ ತಿನ್ನಲು ಬಿಡಲಿಲ್ಲ ಅವಳ ಮಗ!!! ತಾನೂ ತಿನ್ನಲಿಲ್ಲ. ಅವಳಿಗೂ ತಿನ್ನಲು ಬಿಡಲಿಲ್ಲ. ಹಾಗೆಂದು.. ಅವಳಿಗೆ ಸಿಟ್ಟು ಬರಲಿಲ್ಲ. ಕಾಡುವ ಮಗನನ್ನು ಮುದ್ದು ಮಾಡುತ್ತಿದ್ದಳು. ನನಗೆ ಅಮ್ಮನ ನೆನಪಾಯ್ತು. ಅವಳ ಎಷ್ಟು ಸಣ್ಣ ಸಣ್ಣ ಆಸೆಗಳನ್ನು ನಾನು ಹೀಗೆ ಸುಟ್ಟಿದ್ದೆನೊ ಗೊತ್ತಿಲ್ಲ. ಇವತ್ತಿನವರೆಗೂ ನನ್ನ ಗಳಿಕೆಯಲ್ಲಿ ಅವಳಿಗಾಗಿ ಹೆಚ್ಚಿನದೇನೂ ತರಲಾಗಲಿಲ್ಲ. ಒಂದು ಸೀರೆ ತಂದರೂ "ದುಡ್ಡು ಕಳೀಬೇಡ. ಕೂಡಿಡು. ಬೇರೆಯವರ ಮುಂದೆ ಕೈಯ್ಯೊಡ್ಡದ ಹಾಗೆ ಮಾಡಿಕೊ" ಅನ್ನುತಾಳೆ ನನ್ನಮ್ಮ. ಕಡೆಯಪಕ್ಷ ಅವಳಿಗೆ ಬೇಕೆನಿಸಿದಾಗ ಹೋಗಿ ಮಾತನಾಡಲೂ ಆಗದ ಹಾಗಿದೆ ನನ್ನ ಕೆಲಸದ ಹಾವಳಿ. ಅಥವಾ ನನ್ನ ಕೆಲಸ ಹಾವಳಿ ಮಾಡುವ ಹಾಗೆ ನಾನೇ ಮಾಡಿಕೊಂಡಿದ್ದೇನೋ ತಿಳಿಯದು. ಅಮ್ಮನನ್ನು ತುಂಬಾ ನೋಡಬೇಕು ಅನ್ನಿಸಿದೆ. ಆದಷ್ಟೂ ಬೇಗ ಹೋಗಿ ಬರಬೇಕು.

No comments:

Post a Comment